Tuesday, May 5, 2009

ಅವಿದ್ಯಾನಿರೂಪಣಮ್

ಪಂಡಿತ ಗೋಷ್ಠಿಯ ನಡುವಲಿ
ಖಂಡಿತವಾದದ ಕಡುಗವ ತೋರಿಯವಿದ್ಯಾ
ಮಂಡನದಲಿ ಮರೆವಾಗಲೆ
ಕಂಡಿತವಿದ್ಯಾ ಗವಾಕ್ಷಿಯೊಳ್ ತೊಳಗುತಲೀ ||

----------------
ಪದಾರ್ಥ:
ಕಡುಗ: ಖಡ್ಗ
ತೋರಿಯವಿದ್ಯಾ: ತೋರಿ/ತೋರಿಸಿ+ಅವಿದ್ಯಾ
ಕಂಡಿತವಿದ್ಯಾ: ಕಂಡಿತು+ಅವಿದ್ಯಾ
ಗವಾಕ್ಷಿಯೊಳ್: ಗವಾಕ್ಷಿಯಲ್ಲಿ
ತೊಳಗುತಲೀ: ಹೊಳೆಯುತ್ತ
----------------

ಇದರ ಮೂಲವು ಶ್ರೀ ವಿದ್ಯಾರಣ್ಯರ ಪಞ್ಚದಶೀ ಶ್ಲೋಕ.

ನಿರೂಪೈತುಮಾರಭ್ದೇ ನಿಖಿಲೈರಪಿ ಪಂಡಿತೈಃ
ಅಜ್ಞಾನಂ ಪುರಸಸ್ತೇಷಾಂ ಭಾತಿಕಕ್ಷಾಸು ಕಾಸುಚಿತ್ ||

Wednesday, February 18, 2009

ಶೃಂಗಾರ ಮುಕ್ತಕ 1

ಕಮಲಮುಖಿಯನೆ ನಿರುತದೀಕ್ಷಿಪು

ದಮಲ ಸಂಧ್ಯೆಯಲತಿಶಯ ಕರಣ

ಸುಮವನಾರಾಧಿಪುದು ಅನುನಯಿಸಿ ಪ್ರಿಯಾಂಗನೆಯಾ

ಅಮರವಾದಿರುಳ ಸುರತಿಯೊಳವ

ಳಮ್ಬುಜಾನನೆಯೊಡನೆ ಸಂಭ್ರಮ

ವುಮನದೊಳರಸನು ತುಡಿತವದೇಕಿಂದು ಬೆಸಗೊಂಡ |

Thursday, August 7, 2008

ನಲ್ಮೆ

ಇರುಳ ಇನಿದನಿಯೊಂದು
ಕುರುಳ ಬೆಡಗಿನಲೊಮ್ಮೆ
ತೋರಿಬರಲಿರುವವೊಲು ಹೊರಗೆ ನಲುಮೆ ಚಂದ್ರ
ತೆರವು ಉಳಿದವಕೆಲ್ಲ
ಮರವೆ ಔಷಧವಾಗೆ
ತರತರದನಲುವಾತು, ಇರುಳು ಕಳೆವುದಿಲ್ಲ

Thursday, July 31, 2008

ಗುರುಭ್ಯೋ ನಮಃ ||

ಛಾಯೆಯಾದೀ ಜಗದ ಮಾಯಾ
ವಿನೋದಂಗಳ ಕಜ್ಜ ಮೂಲಂ
ಗಳ ವಿಕೋಪಕ್ಕೆರವಿನಲಿ ಮಹತತ್ತ್ವವರಹಿದಗೆ |
ಲೇಸು ಜೀವನ ಮೌಲ್ಯ ಹಿರಿದದು
ವೆ ಮುಕ್ತಿಗೆಮೊದಲ ಸೋಪಾನವೆ
ನುವಗುರುಗೆ ಭವಹರಗೆ ಸಲ್ಲಿಪುದೆನ್ನವಂದನೆಯುಂ ||

Tuesday, July 29, 2008

ಇಲ್ಲಿಯವರೆಗಿನದೆಲ್ಲವನ್ನೂ ಸಾಕೆನ್ನುತ್ತಾ.........

ಹಳೆಹಾದಿ ಬಲುಕಿರಿದು
ಬೇಗೆ ಅನುದಿನವಾಗೆ
ಕಾರ್ಗತ್ತಲೊಂದೆ ದಿಟ
ಇಲ್ಲ ಬೆಳಕಿನ ಊಟೆ.....

ಎಂದಾದರೊಂದು ದಿನ
ಇಷ್ಟುದಿನಗಳ ಹಾದಿ
ಮೀರಿ ಶಕವನೆ ಕಳೆದು
ರಸಲೋಕವಿಸ್ತಾರವನು
ಮೀಟೆ ಹುಳುವಾಗೆ........

ಸಾಕಿನ್ನು ಈ ದಾರಿ
ಬಂದರೇನಹುದು
ಗತಿಯಿಲ್ಲ ಸ್ಥಿತಿಯಿಲ್ಲ
ಎಲ್ಲವೂ ಅಗ್ರಾಹ್ಯ-
ವದುವೆ ಕಸುಬು........

ಇಲ್ಲಿಯವರೆಗಿನದೆಲ್ಲವಕ್ಕೂ ನಮಸ್ಕಾರ.........

Wednesday, October 17, 2007

The sand and the foam

ನೊರೆ ಮರಳ ಮಧ್ಯದೊಳು,
ನನ್ನಲೆಮಾರಿ ಭ್ರಮಣವಿರಲು,
ಬಿರುವಾತವೆನ್ನ ಪಾದಗಳನಳಿಸದೇ?
ಅದಕೆ ನೊರೆಯೊಂದು ಲೆಕ್ಕವೇ?
ಆದರೆ ತಟಶರಧಿಗಳ ನಿತ್ಯತ್ವಕ್ಕೆ ಇವುಗಳ ಹಂಗೇ?

-----------------------------------------------

ಇದು ಖಲೀಲ್ ಗಿಬ್ರಾನರ The sand and the foamದ ಭಾವಾನುವಾದ

ಮೂಲಪದ್ಯ:
I am forever walking upon these shores,
Betwixt the sand and the foam,
The high tide will erase my foot-prints,
And the wind will blow away the foam.
But the sea and the shore will remain Forever

Thursday, October 11, 2007

ಲಲಿತ

ಅವ್ಯಕ್ತ ಮೂಲದ;
ತಿಳಿದೂ ಗೂಢವಾಗುವ
ನಾದದ ಹರಿವಿಗೆ;
ದಿವಾಪಲಾಪಿಸುವ
ನಿಶಾತನ್ಮಯತೆಯ ಮೆರಗು....


ಸರ್ವವೂ ಲಯಹೊಂದಿ
ಕಾಲದ ಚಲನೆ
ಸ್ತಬ್ಧವಾದಂತೆ....
ಬೆಳಕೂ ತಟ್ಟದ ನಿಶ್ಶಬ್ದ....

ಉಷೆಯಾಗಮನದ
ಅರುಣದಲ್ಲಿ
ಬಾನೆಲ್ಲ ಕೆಂಪಾಗಿ
ರಾತ್ರಿನೀಲವ ಸೀಳುವಂತೆ
ನಿಶಾದಿವೆಗಳೆರಡೂ
ಸರಸವಾಡುತ್ತವೆ,
ಅನಂತ
ಭ್ರಮಣದ
ಚಕ್ರ ಗತಿಯಾಗಿ


ಸುಳಿವ ಗಾಳಿ
ಮಂದಾನಿಲವಾಗುತ್ತದೆ
ಎಲೆಗಳ ಮಧ್ಯೆ
ಅಡಗಿಕೊಳ್ಳುತ್ತ;
ಕಾಲದ ಅಕ್ಷ
ನಿಧಾನವಾಗಿ
ತಿರುಗಿದಂತೆ

ನಾದದ
ಗರ್ಭದೊಳಗಿನ
ಅನಾಹತ
ಬಿಂದುವಿನಲ್ಲಿ
ಸುಪ್ತ
ನಾದದ ಚಲನೆ
ಅರುಣ ರಶ್ಮಿಯ
ದೆಸೆಯಿಂದ

ಏರೇರಿ ಸಾಗುತ್ತ
ಮತ್ತೆ ಕಾಣದ
ಆಳದಲ್ಲಿ ತಪ್ಪಿಸುವ;
ಒಮ್ಮೊಮ್ಮೆ ನುಗ್ಗುವ;
ತನ್ನ ಮೂಲವರಸಿ
ನಾದ ಮಧ್ಯದಲ್ಲಿ
ಘನೀಭವಿಸುವ
ಶೃತಿ ವಿಲಾಸ.

ಖೇಚರಗಳ ಧಮನಿಗಳಲ್ಲಿ
ಇದೇ ನಾದ
ಪ್ರವಹಿಸಿದಂತೆ;
ಅರುಣ ರಶ್ಮಿ
ಮತ್ತೂ ಛೇದಿಸಿದಂತೆ;
ಪರಾಪರಗಳ ಭೇದವಿಲ್ಲದೇ

ತಟಸ್ಥವಾದಲ್ಲೇ
ಮಧ್ಯದ ಪ್ರಹಸನ;
ಅನಾದಿ ಅನಂತದ
ಅಭಿನ್ನ ಸಾಕ್ಷಾತ್ಕಾರ.